1893-1983. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಸಮಾಜಶಾಸ್ತ್ರಜ್ಞರು ಹಾಗೂ ಸಂಸ್ಕತ ವಿದ್ವಾಂಸರು. ಸಂಸ್ಕೃತ ಎಂ.ಎ. ಪದವಿಯನ್ನು ಕುಲಪತಿಗಳ ಪದಕದೊಂದಿಗೆ ಪಡೆದು (1918) ಮುಂಬಯಿಯ ಎಲ್ಫಿನ್ಸ್ಟನ್ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ಯಾಟ್ರಿಕ್ ಗೆಡ್ಡಸ್ ಎಂಬ ಪ್ರಸಿದ್ಧ ಸಮಾಜವಿಜ್ಞಾನದ ಪ್ರಾಧ್ಯಾಪಕರಿಂದ ಪ್ರಭಾವಿತರಾಗಿ ಸಮಾಜವಿಜ್ಞಾನದಲ್ಲಿ ಆಸಕ್ತಿ ವಹಿಸಿದ ಇವರು ಆ ಕ್ಷೇತ್ರದಲ್ಲಿ ವಿಶೇಷ ವ್ಯಾಸಂಗಕ್ಕೆಂದು ಲಂಡನ್ನಿಗೆ ತೆರಳಿದರು. ಅಲ್ಲಿ ಪ್ರೊಫೆಸರ್ ಎಲ್.ಟಿ. ಹಾಬ್ಹೌಸ್ ಎಂಬುವರ ನೇತೃತ್ವದಲ್ಲಿ ಕೆಲಕಾಲ ಅಭ್ಯಾಸ ಮಾಡಿದರಲ್ಲದೆ ಪ್ರೊಫೆಸರ್ ಡಬ್ಲ್ಯು. ಆರ್.ಎಸ್. ರಿವರ್ಸ್ ಅವರನ್ನು ಕೇಂಬ್ರಿಜ್ನಲ್ಲಿ ಸಂಧಿಸಿದರು. ಸಮಾಜವಿಜ್ಞಾನದಲ್ಲಿ ವಿಶೇಷ ಪರಿಣತಿಯನ್ನು ಪಡೆದು ಪಿಎಚ್.ಡಿ. ಪದವಿಯೊಂದಿಗೆ 1923ರಲ್ಲಿ ಸ್ವದೇಶಕ್ಕೆ ಮರಳಿದರು. 

ಮುಂಬಯಿ ವಿಶ್ವವಿದ್ಯಾಲಯದ ಸಮಾಜವಿಜ್ಞಾನ ಇಲಾಖೆಯಲ್ಲಿ ಉಪ ಪ್ರಾಧ್ಯಾಪಕ ಮತ್ತು ಇಲಾಖೆಯ ಮುಖ್ಯರೆಂದು ನೇಮಕಗೊಂಡ ಘುರ್ಯೆಮುಂದೆ ಪ್ರಾಧ್ಯಾಪಕರಾದರು.

ಭಾರತೀಯ ಮತ್ತು ಪಾಶ್ಚಾತ್ಯ ಸಮಾಜವಿಜ್ಞಾನ ಮತ್ತು ಮಾನವಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕುರಿತು ಇವರು ಬರೆದು ಪ್ರಕಟಿಸಿರುವ ಪ್ರಬಂಧಗಳು ಇವರ ಪಾಂಡಿತ್ಯ, ವಸ್ತುನಿಷ್ಠೆ ಮತ್ತು ನಿಷ್ಕೃಷ್ಟ ವಿಶ್ಲೇಷಣೆಗಳಿಗೆ  ಹೆಸರಾಗಿದ್ದು, ಸಮಾಜವಿಜ್ಞಾನಕ್ಕೆ ಸಂದಿರುವ ಅಮೂಲ್ಯ ಕೊಡುಗೆಗಳೆನಿಸಿವೆ. ‘ಮ್ಯಾನ್ ಇನ್ ಇಂಡಿಯ’ ಪತ್ರಿಕೆಯಲ್ಲಿ 1925ರಲ್ಲಿ ಪ್ರಕಟವಾದ ‘ನಾಗರಿಕತೆ ಮತ್ತು ಸಂತಾನಾಭಿವೃದ್ಧಿ ಶಕ್ತಿ’ ಎಂಬ ಪ್ರಬಂಧ ಇವರಿಗೆ ಒಳ್ಳೆಯ ಪ್ರಸಿದ್ಧಿಯನ್ನು ತಂದುಕೊಟ್ಟಿತು.

ಘುರ್ಯೆ ಅವರ ಪ್ರಥಮ ಕೃತಿ ‘ಕ್ಯಾಸ್ಟ್ ಅಂಡ್ ರೇಸ್ ಇನ್ ಇಂಡಿಯ’ (1932) ಈ ಕ್ಷೇತ್ರದ ಸಂಶೋಧನ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಆಕರಗ್ರಂಥವೆನಿಸಿದೆ. ಭಾರತೀಯ ಮಾನವಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಧುನಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳಿಂದ ನೋಡುವುದು ಘುರ್ಯೆ ಅವರ ಪದ್ಧತಿ. ಇವರು ಪ್ರಾರಂಭಿಸಿದ ಭಾರತೀಯ ಸಾಮಾಜಿಕ ಸಂಘ ಇಂಥ ಕೆಲಸಕ್ಕೆ ಕೈಹಾಕಿರುವ ಮೊದಲ ಸಂಸ್ಥೆ. ಇವರ ಅಧ್ಯಕ್ಷತೆಯಲ್ಲಿ ಸಂಘ ಪ್ರತಿವರ್ಷ ಸೋಷಿಯ ಲಾಜಿಕಲ್ ಬುಲೆಟಿನ್ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದೆ.

ಘುರ್ಯೆ ಅವರ ಇತರ ಪ್ರಮುಖ ಕೃತಿಗಳಿವು : ಭರತನಾಟ್ಯ ಅಂಡ್ ಇಟ್ಸ್ ಕಾಸ್ಟ್ಯೂಮ್ (1958), ರಿಲಿಜಿಯಸ್ ಕಾನ್ಷಸ್ನೆಸ್ (1965). ಕಲ್ಚರ್ ಅಂಡ್ ಸೊಸೈಟಿ ಎಂಬ ಇವರ ಇನ್ನೊಂದು ಕೃತಿ 1947 ರಲ್ಲಿ ಲಂಡನ್ನಿನಿಂದ ಪ್ರಕಟವಾಯಿತು. ಇವರ ಅರುವತ್ತನೆಯ ಹುಟ್ಟುಹಬ್ಬದಂದು ಇಂಡಿಯನ್ ಸಾಧೂಸ್ (1953) ಎಂಬ ಇವರ ಪುಸ್ತಕ ಪ್ರಕಟವಾಯಿತು. ಘುರ್ಯೆಯವರಿಗೆ ಅವರ ಶಿಷ್ಯರು ಮತ್ತು ಅಭಿಮಾನಿಗಳು 1954ರಲ್ಲಿ ಒಂದು ಗೌರವ ಗ್ರಂಥವನ್ನು ಅರ್ಪಿಸಿದರು.		(ಎ.ಬಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ